Telegram Join My Telegram WhatsApp Join My WhatsApp

₹4,824 ಕೋಟಿ ಹೂಡಿಕೆ ಒಪ್ಪಿಗೆ: ಕರ್ನಾಟಕದಲ್ಲಿ 14,525 ಹೊಸ ಉದ್ಯೋಗಗಳು – ಯಾವ ಜಿಲ್ಲೆಗಳಿಗೆ ಲಾಭ?

ಕರ್ನಾಟಕದಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ಸಿಕ್ಕಿದೆ. ರಾಜ್ಯದಲ್ಲಿ ಒಟ್ಟು ₹4,824 ಕೋಟಿ ಬಂಡವಾಳ ಹೂಡಿಕೆಗೆ ಸರ್ಕಾರ ಅನುಮೋದನೆ ನೀಡಿದ್ದು, ಇದರ ಫಲವಾಗಿ ಮುಂದಿನ ದಿನಗಳಲ್ಲಿ ಸುಮಾರು 14,525 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಶುಕ್ರವಾರ ನಡೆದ 158ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ 37 ಹೊಸ ಕೈಗಾರಿಕೆಗಳು ಹಾಗೂ 2 ಹೆಚ್ಚುವರಿ ಹೂಡಿಕೆ ಯೋಜನೆಗಳಿಗೆ ಒಟ್ಟು ₹4,824.31 ಕೋಟಿ ಹೂಡಿಕೆ ಮಾಡಲು ಒಪ್ಪಿಗೆ ನೀಡಲಾಗಿದೆ.

ಈ ಯೋಜನೆಗಳು ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಕೋಲಾರ, ರಾಮನಗರ ಸೇರಿದಂತೆ 13 ಜಿಲ್ಲೆಗಳಲ್ಲಿ ಸ್ಥಾಪನೆಯಾಗಲಿದ್ದು, ಸಾವಿರಾರು ಯುವಕರಿಗೆ ಉದ್ಯೋಗಾವಕಾಶಗಳನ್ನು ನೀಡುವ ಸಾಧ್ಯತೆ ಇದೆ.

ಯಾವ ಯಾವ ವಲಯಗಳಲ್ಲಿ ಹೂಡಿಕೆ?

ಈ ಹೂಡಿಕೆಗಳು ವಿವಿಧ ಕೈಗಾರಿಕಾ ಕ್ಷೇತ್ರಗಳಲ್ಲಿ ನಡೆಯಲಿವೆ. ಪ್ರಮುಖವಾಗಿ:

ಐಟಿ ಮೂಲಸೌಲಭ್ಯ

ಸಕ್ಕರೆ ಕಾರ್ಖಾನೆ

ಟೆಕ್ನಿಕಲ್ ಟೆಕ್ಸ್‌ಟೈಲ್

ಕಂಪ್ರೆಸ್ಡ್ ಗ್ಯಾಸ್ ಘಟಕ

ವೈಮಾಂತರಿಕ್ಷ (Aerospace)

ಚಿನ್ನಾಭರಣ ತಯಾರಿಕೆ

ಎಲೆಕ್ಟ್ರಾನಿಕ್ಸ್

ಸಾಫ್ಟ್‌ವೇರ್

ಪಂಚತಾರಾ ಹೋಟೆಲ್ ನಿರ್ಮಾಣ

ಈ ಯೋಜನೆಗಳಿಂದ ರಾಜ್ಯದ ಕೈಗಾರಿಕಾ ವೃದ್ಧಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ.

ಪ್ರಮುಖ ಹೂಡಿಕೆ ಯೋಜನೆಗಳು

ಕೆಲವು ಪ್ರಮುಖ ಯೋಜನೆಗಳು ಇಂತಿವೆ:

ಬಾಗ್ಮನೆ ಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ – ₹494.65 ಕೋಟಿ ಐಟಿ ಮೂಲಸೌಲಭ್ಯ ಯೋಜನೆ

ಕರ್ನಾಟಕ ಬಂಗಾರು ಷುಗರ್ಸ್ – ₹443.50 ಕೋಟಿ ಸಕ್ಕರೆ ಕಾರ್ಖಾನೆ

ಕ್ಲೆನೆ ಪ್ಯಾಕ್ಸ್ – ₹376 ಕೋಟಿ ಟೆಕ್ನಿಕಲ್ ಟೆಕ್ಸ್‌ಟೈಲ್ ಘಟಕ

ತ್ರಿಶೂಲ್ ಬಿಲ್ಡ್‌ಟೆಕ್ & ಇನ್‌ಫ್ರಾಸ್ಟ್ರಕ್ಚರ್ – ₹300 ಕೋಟಿ ಪಂಚತಾರಾ ಹೋಟೆಲ್

ಟ್ರೌಲ್ಟ್ ಗ್ರಾಸ್ (ಮುಧೋಳ) – ₹257.77 ಕೋಟಿ ಕಂಪ್ರೆಸ್ಡ್ ಗ್ಯಾಸ್ ಘಟಕ

ತ್ಸುಯೊ ಮ್ಯಾನುಫ್ಯಾಕ್ಚರಿಂಗ್ – ₹250 ಕೋಟಿ ಇಲೆಕ್ಟ್ರಿಕ್ ವಾಹನಗಳ ಮೋಟರ್ ಹಾಗೂ ಕಂಟ್ರೋಲರ್ ತಯಾರಿಕೆ ಘಟಕ

ದೊಡ್ಡ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ

₹50 ಕೋಟಿಗೂ ಹೆಚ್ಚು ಹೂಡಿಕೆಯ 22 ಪ್ರಮುಖ ದೊಡ್ಡ ಮತ್ತು ಮಧ್ಯಮ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, ಇದರಿಂದ ಸುಮಾರು ₹3,908.68 ಕೋಟಿ ಹೂಡಿಕೆ ಆಗಲಿದೆ. ಇದರ ಮೂಲಕ 12,475 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಇದೇ ವೇಳೆ ₹15 ಕೋಟಿ ರಿಂದ ₹50 ಕೋಟಿ ಒಳಗಿನ 15 ಹೊಸ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದ್ದು, ಇದರಿಂದ ₹350.60 ಕೋಟಿ ಹೂಡಿಕೆ ಆಗಿ 1,750 ಜನರಿಗೆ ಉದ್ಯೋಗ ಸಿಗಲಿದೆ.

ಹೆಚ್ಚುವರಿ ಹೂಡಿಕೆ ಯೋಜನೆಗಳು

ಇನ್ನೂ 2 ಹೆಚ್ಚುವರಿ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರ ಮೂಲಕ ₹565.03 ಕೋಟಿ ಹೂಡಿಕೆ ಆಗಲಿದ್ದು, ಸುಮಾರು 300 ಜನರಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.

ಈ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎನ್. ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment