ತಿರುವನಂತಪುರಂ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಮೊನಾಲಿಸಾ–ಫರ್ಹಾನ್ ಖಾನ್ ವಿವಾಹದ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಇದೀಗ ದಂಪತಿಗಳು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮದುವೆ ಕುರಿತು “ಲವ್ ಜಿಹಾದ್” ಅಥವಾ “ಮತಾಂತರ” ಎಂಬ ಆರೋಪಗಳು ಸಂಪೂರ್ಣ ಸುಳ್ಳು ಎಂದು ಅವರು ಹೇಳಿದ್ದಾರೆ.
ತಿರುವನಂತಪುರಂನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೊನಾಲಿಸಾ ಮತ್ತು ಫರ್ಹಾನ್ ಖಾನ್, ಈ ವಿವಾಹವು ಪರಸ್ಪರ ಒಪ್ಪಿಗೆಯೊಂದಿಗೆ ನಡೆದದ್ದು. ಇದರಲ್ಲಿ ಯಾವುದೇ ಬಲವಂತ ಅಥವಾ ಮತಾಂತರದ ವಿಷಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
“ಯಾರೂ ಮತಾಂತರಗೊಂಡಿಲ್ಲ”
ಸಾಮಾಜಿಕ ಜಾಲತಾಣಗಳಲ್ಲಿ ಹಲವು ತಪ್ಪು ಮಾಹಿತಿಗಳು ಹರಿದಾಡುತ್ತಿದ್ದ ಹಿನ್ನೆಲೆ ಜನರಲ್ಲಿ ಗೊಂದಲ ನಿವಾರಣೆ ಮಾಡಲು ಮಾಧ್ಯಮಗಳ ಮುಂದೆ ಬಂದಿದ್ದೇವೆ ಎಂದು ದಂಪತಿಗಳು ತಿಳಿಸಿದರು.
“ನಮ್ಮಿಬ್ಬರಲ್ಲಿ ಯಾರೂ ಮತಾಂತರಗೊಂಡಿಲ್ಲ. ಫರ್ಹಾನ್ ಖಾನ್ ಅವರನ್ನು ಮದುವೆಯಾಗುವ ನಿರ್ಧಾರ ಸಂಪೂರ್ಣವಾಗಿ ನನ್ನದೇ ಆಗಿತ್ತು. ಆರಂಭದಲ್ಲಿ ಅವರಿಗೆ ಮದುವೆಯ ಬಗ್ಗೆ ಹಿಂಜರಿಕೆ ಇತ್ತು. ಆದರೆ ನಾನು ಪಟ್ಟು ಹಿಡಿದು ಈ ಮದುವೆ ನಡೆದಿತು,” ಎಂದು ಮೊನಾಲಿಸಾ
ಹೇಳಿದರು.“ನಮ್ಮಿಬ್ಬರಲ್ಲಿ ಯಾರೂ ಮತಾಂತರಗೊಂಡಿಲ್ಲ. ಫರ್ಹಾನ್ ಖಾನ್ ಅವರನ್ನು ಮದುವೆಯಾಗುವ ನಿರ್ಧಾರ ಸಂಪೂರ್ಣವಾಗಿ ನನ್ನದೇ ಆಗಿತ್ತು. ಆರಂಭದಲ್ಲಿ ಅವರಿಗೆ ಮದುವೆಯ ಬಗ್ಗೆ ಹಿಂಜರಿಕೆ ಇತ್ತು. ಆದರೆ ನಾನು ಪಟ್ಟು ಹಿಡಿದು ಈ ಮದುವೆ ನಡೆದಿತು,” ಎಂದು ಮೊನಾಲಿಸಾ ಹೇಳಿದರು.
ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ
ಫರ್ಹಾನ್ ಖಾನ್ ಮಾತನಾಡುತ್ತಾ, ಮೊನಾಲಿಸಾ ಅವರ ಆಸೆಯಂತೆ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರವೇ ವಿವಾಹ ನಡೆದಿದೆ ಎಂದು ತಿಳಿಸಿದರು.
“ಮೊನಾಲಿಸಾ ಅವರ ಇಚ್ಛೆಯಂತೆ ದೇವಸ್ಥಾನದಲ್ಲಿ ಎಲ್ಲಾ ವಿಧಿವಿಧಾನಗಳನ್ನು ಪಾಲಿಸಿ ಮದುವೆ ಮಾಡಿಕೊಂಡಿದ್ದೇವೆ. ನಾವು ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತೇವೆ,” ಎಂದು ಫರ್ಹಾನ್ ಖಾನ್ ಹೇಳಿದ್ದಾರೆ
.ಅಪ್ರಾಪ್ತ ವಯಸ್ಸಿನ ಆರೋಪಕ್ಕೆ ಉತ್ತರ
ಮೊನಾಲಿಸಾ ಅಪ್ರಾಪ್ತ ವಯಸ್ಸಿನವಳು ಎಂಬ ಆರೋಪಗಳನ್ನೂ ದಂಪತಿಗಳು ತಳ್ಳಿಹಾಕಿದ್ದಾರೆ. ಇದನ್ನು ಖಂಡಿಸಲು ಫರ್ಹಾನ್ ಖಾನ್ ಅವರು ಆಕೆಯ ಆಧಾರ್ ಕಾರ್ಡ್ ಹಾಗೂ ಜನ್ಮ ಪ್ರಮಾಣಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಮಾಧ್ಯಮಗಳ ಮುಂದೆ ಹಾಜರುಪಡಿಸಿದರು.
ಅಲ್ಲದೆ ಈ ವಿವಾಹವನ್ನು ಕೇರಳ ಸರ್ಕಾರದ K-SMART ಆ್ಯಪ್ ಮೂಲಕ ಕಾನೂನುಬದ್ಧವಾಗಿ ನೋಂದಣಿ ಮಾಡಲಾಗಿದೆ ಎಂದು ಅವರು ಹೇಳಿದರು.
ಸುಳ್ಳು ಸುದ್ದಿಗಳನ್ನು ನಂಬಬೇಡಿ
“ಉತ್ತರ ಭಾರತದ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ತಪ್ಪು ಸುದ್ದಿಗಳನ್ನು ನಂಬಬೇಡಿ,” ಎಂದು ದಂಪತಿಗಳು ಸಾರ್ವಜನಿಕರಿಗೆ ಮನವಿ ಮಾಡಿದರು.
ವೈರಲ್ ಸ್ಟಾರ್ನಿಂದ ಮದುವೆವರೆಗೆ
ಮಧ್ಯಪ್ರದೇಶದ ಇಂದೋರ್ ಮೂಲದ ಮೊನಾಲಿಸಾ, ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದಾಗ ಸೆರೆಹಿಡಿಯಲಾದ ವಿಡಿಯೋದಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದರು. ಅವರ ಆಕರ್ಷಕ ಕಣ್ಣುಗಳು ಮತ್ತು ನಗು ಕಾರಣದಿಂದ ‘ಕುಂಭಮೇಳದ ಮೊನಾಲಿಸಾ’ ಎಂದೇ ದೇಶದಾದ್ಯಂತ ಪ್ರಸಿದ್ಧರಾದರು.
ವೈರಲ್ ಆದ ನಂತರ ಅವರಿಗೆ ಚಿತ್ರರಂಗದಲ್ಲಿಯೂ ಅವಕಾಶಗಳು ಸಿಕ್ಕಿದ್ದವು. ಚಿತ್ರೀಕರಣದ ವೇಳೆ ಮಹಾರಾಷ್ಟ್ರ ಮೂಲದ ನಟ ಫರ್ಹಾನ್ ಖಾನ್ ಅವರನ್ನು ಅವರು ಭೇಟಿ ಮಾಡಿದ್ದರು. ಕಳೆದ ಆರು ತಿಂಗಳಿಂದ ಇವರಿಬ್ಬರ ನಡುವೆ ಪ್ರೀತಿ ಬೆಳೆಯಿತು ಎಂದು ಹೇಳಲಾಗಿದೆ
ಮಾರ್ಚ್ 11 ರಂದು ಮದುವೆ
ಇವರಿಬ್ಬರೂ ಮಾರ್ಚ್ 11, 2026ರಂದು ಕೇರಳದ ತಿರುವನಂತಪುರಂ ಜಿಲ್ಲೆಯ ಪೂವಾರ್ ಸಮೀಪದ ಅರುಮನೂರ್ ನೈನಾರ್ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು.
ಈ ಅಂತರ್ಧರ್ಮೀಯ ವಿವಾಹಕ್ಕೆ ಮೊನಾಲಿಸಾ ಅವರ ಕುಟುಂಬದಿಂದ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ದಂಪತಿಗಳು ಥಂಪನೂರು ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ಕೋರಿದ್ದರು ಎಂದು ತಿಳಿದುಬಂದಿದೆ.
ಆದರೂ ‘ಲವ್ ಜಿಹಾದ್’ ಎಂಬ ಆರೋಪಗಳನ್ನು ಮೊನಾಲಿಸಾ ಮತ್ತೊಮ್ಮೆ ತಳ್ಳಿಹಾಕಿದ್ದು, ಇದು ಕೇವಲ ಪರಸ್ಪರ ಪ್ರೀತಿಯಿಂದ ನಡೆದ ವಿವಾಹ ಎಂದು ಅವರು ಹೇಳಿದ್ದಾರೆ.