ಎಲ್ಪಿಜಿ ಸಿಲಿಂಡರ್ಗಳ ಕೃತಕ ಅಭಾವ ಮತ್ತು ಕಾಳಸಂತೆ ತಡೆಯಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಜಾರಿ ಮಾಡಿದೆ. ಈಗ ಸಿಲಿಂಡರ್ ಬುಕ್ಕಿಂಗ್ಗಳ ನಡುವೆ 25 ದಿನಗಳ ಗ್ಯಾಪ್ ಕಡ್ಡಾಯ. ಸಂಪೂರ್ಣ ವಿವರ ಇಲ್ಲಿದೆ.
ನವದೆಹಲಿ: ದೇಶದಲ್ಲಿ ಎಲ್ಪಿಜಿ (LPG) ಸಿಲಿಂಡರ್ಗಳ ಕೃತಕ ಅಭಾವ ಹಾಗೂ ಕಾಳಸಂತೆಯನ್ನು ತಡೆಯಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಗ್ಯಾಸ್ ಪೂರೈಕೆ ಸರಾಗವಾಗಿ ನಡೆಯಲು ಮತ್ತು ಸಿಲಿಂಡರ್ಗಳ ದಾಸ್ತಾನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಹೊಸ ನಿಯಮದ ಪ್ರಕಾರ, ಒಂದು ಸಿಲಿಂಡರ್ ಬುಕ್ಕಿಂಗ್ ಮತ್ತು ಮತ್ತೊಂದು ಬುಕ್ಕಿಂಗ್ ನಡುವೆ ಕನಿಷ್ಠ 25 ದಿನಗಳ ಅಂತರ ಕಡ್ಡಾಯವಾಗಿದೆ. ಇದುವರೆಗೆ ಈ ಅವಧಿ 21 ದಿನಗಳಷ್ಟಿತ್ತು. ಇದೀಗ ಅದನ್ನು ಹೆಚ್ಚಿಸಿ 25 ದಿನಗಳಿಗೆ ಮಾಡಲಾಗಿದೆ.
ಕೆಲವು ಗ್ರಾಹಕರು ಯುದ್ಧದ ಭೀತಿಯಿಂದ ಅಥವಾ ಅಭಾವದ ಆತಂಕದಿಂದ ತ್ವರಿತವಾಗಿ ಸಿಲಿಂಡರ್ ಬುಕ್ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹಿಂದಿನಂತೆ 50–55 ದಿನಗಳ ನಂತರ ಬುಕ್ಕಿಂಗ್ ಮಾಡುವ ಬದಲು, ಈಗ ಕೆಲವರು 15 ದಿನಗಳಲ್ಲೇ ಬುಕ್ಕಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಕೃತಕ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರ ವಾಣಿಜ್ಯ (Commercial) ಸಿಲಿಂಡರ್ಗಳಿಗಿಂತ ಮನೆ ಬಳಕೆಯ (Domestic) ಗ್ರಾಹಕರಿಗೆ ಮೊದಲ ಆದ್ಯತೆ ನೀಡಲು ಸೂಚನೆ ನೀಡಿದೆ. “ಮನೆ ಬಳಕೆಯ ಗ್ರಾಹಕರ ಹಿತವೇ ಸರ್ಕಾರದ ಮೊದಲ ಆದ್ಯತೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಜೊತೆಗೆ, ದೇಶೀಯ ರಿಫೈನರಿಗಳಿಗೆ ಎಲ್ಪಿಜಿ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲು ಸರ್ಕಾರ ಸೂಚನೆ ನೀಡಿದೆ. ಗ್ಯಾಸ್ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
ಇದಲ್ಲದೆ, ಭಾರತಕ್ಕೆ ಎಲ್ಪಿಜಿ ಪೂರೈಕೆಯನ್ನು ಹೆಚ್ಚಿಸಲು ಅಲ್ಜೀರಿಯಾ, ಆಸ್ಟ್ರೇಲಿಯಾ, ಕೆನಡಾ ಮತ್ತು ನಾರ್ವೆ ಸೇರಿದಂತೆ ಹಲವು ದೇಶಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.